ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಸೆಪ್ಟೆಂಬರ್ ೨೩ ರಂದು ಹ್ಯಾಂಗ್‌ಝೌನಲ್ಲಿ ನಿರೀಕ್ಷೆಯಂತೆಯೇ ಅತ್ಯದ್ಭುತವಾದ ಆಡಂಬರದ ಸಮಾರಂಭದಲ್ಲಿ ಏಷ್ಯನ್ ಗೇಮ್ಸ್ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಈ ಕ್ರೀಡಾಕೂಟವು ಜಗತ್ತಿಗೆ ಏಷ್ಯಾದ ಒಗ್ಗಟ್ಟಿನ ಸಂದೇಶ ಕಳಿಸುವ ಉದ್ದೇಶ ಹೊಂದಿದೆ. ಆದರೆ ಈ ಕ್ರೀಡಾಕೂಟದ ೧೯ನೇ ಆವೃತ್ತಿಯ ಉದ್ಘಾಟನೆಯ ಮುನ್ನಾ ದಿನಗಳು ಏಷ್ಯಾ ದೇಶಗಳ ನಡುವಿನ ಬಿರುಕನ್ನಷ್ಟೇ ಪ್ರದರ್ಶನಕ್ಕಿಟ್ಟವು. ಭಾರತದ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಅರುಣಾಚಲ ಪ್ರದೇಶದ ಮೂವರು ಭಾರತೀಯ ವುಶು ಆಟಗಾರರಿಗೆ ಕೊನೆಯ ಕ್ಷಣದಲ್ಲಿ ಚೀನಾ ಪ್ರವೇಶ ನಿರಾಕರಿಸಿದ್ದಕ್ಕೆ ಪ್ರತಿಭಟನಾರ್ಥವಾಗಿ ತಮ್ಮ ಚೀನಾ ಪ್ರವಾಸವನ್ನು ರದ್ದುಗೊಳಿಸಿದರು. ಹೀಗೆ ಪ್ರವೇಶ ನಿರಾಕರಿಸಲ್ಪಟ್ಟ ನೈಮನ್ ವಾಂಗ್ಸು, ಒನಿಲು ಟೆಗಾ ಮತ್ತು ಮೆಪುಂಗ್ ಲಾಮ್ಗು ಮೂವರು ಕ್ರೀಡಾಪಟುಗಳಿಗೂ ಉಳಿದ ಭಾರತೀಯ ತಂಡದ ಜೊತೆಗೆ ಪ್ರಯಾಣಿಸಲು ಅಗತ್ಯವಾದ ಮಾನ್ಯತೆ ನೀಡಲಾಗಿತ್ತು. ಆದರೆ ಚೀನಾ ವಿಮಾನಯಾನ ಸಂಸ್ಥೆಗೆ ನೀಡಿದ ನಿರ್ದೇಶನದಂತೆ ಅವರನ್ನು ವಿಮಾನ ಹತ್ತಲೇ ಬಿಡಲಿಲ್ಲ. ಚೀನಾ ಈ ಹಿಂದೆ ಅರುಣಾಚಲ ಪ್ರದೇಶದ ಭಾರತೀಯರಿಗೆ ಸ್ಟೇಪಲ್ ವೀಸಾಗಳನ್ನು ನೀಡಿದೆ. ಜುಲೈನಲ್ಲಿ ಅರುಣಾಚಲ ಪ್ರದೇಶದ ಇದೇ ಮೂವರು ವುಶು ಆಟಗಾರರಿಗೆ ಚೆಂಗ್ಡುವಿನಲ್ಲಿ ನಡೆದ ಮತ್ತೊಂದು ಕ್ರೀಡಾಕೂಟದಲ್ಲಿ ಭಾಗವಹಿಸಲು ಸ್ಟೇಪಲ್ ವೀಸಾಗಳನ್ನು ನೀಡಲಾಗಿತ್ತು. ಏಷ್ಯನ್ ಗೇಮ್ಸ್ ಕ್ರೀಡಾಕೊಟದಲ್ಲಿ ಭಾಗವಹಿಸಲು ಡಿಜಿಟಲ್ ಮಾನ್ಯತೆ ಪಡೆದ ಆಟಗಾರರಿಗೆ ವೀಸಾಗಳ ಅಗತ್ಯ ಇರಲಿಲ್ಲ. ಹಾಗಾಗಿ ಈ ಆಟಗಾರರನ್ನು ನಿಷೇಧಿಸುವ ನಿರ್ಧಾರವು ಇವರನ್ನೇ ಗುರಿ ಮಾಡಿ ತೆಗೆದುಕೊಂಡ ಪ್ರತೀಕಾರದ ಹೆಜ್ಜೆ ಎನಿಸುತ್ತದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತನ್ನ ಹೇಳಿಕೆಯಲ್ಲಿ ಈ ಕ್ರಮವನ್ನು “ಉದ್ದೇಶಿತ ಮತ್ತು ಪೂರ್ವ-ನಿರ್ಧಾರಿತ” ಎಂದು ಕರೆದಿದೆ.
ದುರದೃಷ್ಟವಶಾತ್ ಭೌಗೋಳಿಕ ರಾಜಕೀಯ ವಿಷಯಗಳಿಗೆ ಬೀಜಿಂಗ್ ಕ್ರೀಡಾಕೂಟಗಳನ್ನು ಬಳಸಿದ್ದು ಇದು ಮೊದಲೇನಲ್ಲ. ಕಳೆದ ವರ್ಷ ಫೆಬ್ರವರಿಯಲ್ಲಿ ಬೀಜಿಂಗ್ ವಿಂಟರ್ ಒಲಿಂಪಿಕ್ಸ್‌ನ ಪಂಜು ಹಿಡಿಯಲು ಭಾರತದ ಸೇನೆಯೊಂದಿಗೆ ನಡೆದ ಗಾಲ್ವಾನ್ ಕಣಿವೆಯ ಘರ್ಷಣೆಯಲ್ಲಿ ಭಾಗಿಯಾದ ಪೀಪಲ್ಸ್ ಲಿಬರೇಶನ್ ಆರ್ಮಿಯ ಕಮಾಂಡರ್ ಅನ್ನು ಆಯ್ಕೆ ಮಾಡಿತ್ತು. ಚೀನಾ ಈ ಕ್ರೀಡಾಕೂಟಗಳ ಆತಿಥ್ಯ ವಹಿಸಿದ್ದರಿಂದ ಮತ್ತು ಇಂತಹ ಬೃಹತ್ ಕ್ರೀಡಾಕೂಟಗಳಿಗೆ ಬಲವಾದ ಆರ್ಥಿಕ ಬೆಂಬಲಿಗ ದೇಶವಾಗಿರುವುದರಿಂದ, ಆಗ ಮತ್ತು ಈಗ ಎರಡೂ ನಿದರ್ಶನಗಳಲ್ಲಿ, ಸಂಘಟಕರು ಭಾರತದ ಪ್ರತಿಭಟನಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಹ್ಯಾಂಗ್‌ಝೌನಲ್ಲಿ ಅಧ್ಯಕ್ಷ ಕ್ಸಿ ಅವರನ್ನು ಭೇಟಿಯಾದ ಏಷ್ಯಾದ ಒಲಿಂಪಿಕ್ಸ್ ಕೌನ್ಸಿಲ್‌ನ ಹಂಗಾಮಿ ಅಧ್ಯಕ್ಷ ರಣಧೀರ್ ಸಿಂಗ್, ಭೇಟಿಯ ನಂತರ ಮಾಧ್ಯಮಗಳ ಜೊತೆ ಮಾತನಾಡುತ್ತಾ ಕ್ರೀಡಾಪಟುಗಳಿಗೆ ಪ್ರವೇಶ ನಿರಾಕರಣೆಯನ್ನು ಚರ್ಚಿಸಲಾಯಿತು ಎಂದರೇ ಹೊರತು ಅದನ್ನು ಖಂಡಿಸಲಿಲ್ಲ. ಚೀನಾದ ಈ ಕ್ರಮವು ದ್ವಿಪಕ್ಷೀಯ ಸಂಬಂಧಗಳಲ್ಲಿನ ಪ್ರಸ್ತುತ ಮನೆಮಾಡಿರುವ ಅಪನಂಬಿಕೆ ಮತ್ತು ವೀಸಾಗಳನ್ನೂ ಒಳಗೊಂಡಂತೆ ಈ ಸಂಬಂಧದಲ್ಲಿನ ಧೀರ್ಘಕಾಲೀನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಎರಡೂ ದೇಶಗಳ ನಡುವೆ ಸಂವಹನದ ಕೊರತೆಯನ್ನು ಎತ್ತಿ ತೋರಿಸುತ್ತದೆ. ಚೀನಾ ಗಡಿಯಲ್ಲಿ ನಿಯೋಜಿಸುವ ತನ್ನ ಸೇನೆಯನ್ನು ಹಿಂತೆಗೆದುಕೊಳ್ಳದೆ, ಗಡಿಯಲ್ಲಿ ಮತ್ತೆ ಶಾಂತಿ ನೆಲೆಸದೆ ದ್ವಿಪಕ್ಷೀಯ ಸಂಬಂಧ ಮತ್ತೆ ಸಹಜತೆಗೆ ಮರಳಲು ಸಾಧ್ಯವಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ. ಗಡಿಯ ಬಗ್ಗೆ ಚೀನಾ ತನ್ನ ನಿಲುವನ್ನು ಮರುಪರಿಶೀಲಿಸುವವರೆಗೆ, ಭಾರತ ಮತ್ತು ಚೀನಾ ಇಬ್ಬರಿಗೂ ಅನುಕೂಲವಲ್ಲದ ಇದೇ ಪ್ರಕ್ಷುಬ್ಧ ಪರಿಸ್ಥಿತಿ ಮುಂದುವರೆಯಲಿದೆ.
>>> Read full article>>>
Copyright for syndicated content belongs to the linked Source : The Hindu – https://www.thehindu.com/kannada/editorial/kannada-editorial-on-china-using-sporting-events-to-score-geopolitical-points/article67343593.ece